ನಾವು ಯಾರು? ಎಲ್ಲಿಂದ ಬಂದವರು? ಎಲ್ಲಿಗೆ ನಮ್ಮ ಪಯಣ?
ಮಾನವನಿಗೆ ತನ್ನ ವಿಕಾಸದ ಹಾದಿಯನ್ನು ತಿಳಿದುಕೊಳ್ಳುವ ಬಗ್ಗೆ ಸದಾ ಕುತೂಹಲ. ಈ ಕುತೂಹಲವೇ ಇಂದಿನ ವೈಜ್ಞಾನಿಕ ಸಂಶೋಧನೆಗೆ ದಾರಿದೀಪ. ತಾನು ಯಾರು ?ತಾನು ಎಲ್ಲಿಂದ ಬಂದೆ? ತನ್ನೊಳಗಿನ ವಿಕಾಸದ ಕುರುಹುಗಳೇನು? ಎಂಬ ಸಾವಿರಾರು ಪ್ರಶ್ನೆಗಳ ಸುರಿಮಳೆ ಇಂದು ಇತಿಹಾಸವನ್ನು ಬಗೆದು ವಿಕಾಸದ ಪಯಣವನ್ನು ಅನಾವರಣಗೊಳಿಸಿದೆ. ಇತಿಹಾಸ ಕೇವಲ ಪುಸ್ತಕಗಳಲ್ಲಿ ಉಳಿದಿಲ್ಲ ಅದು ನಮ್ಮ ಜೀವಕೋಶಗಳಲ್ಲೇ ಜೀವಂತವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತರಾದ
ಸ್ವಾಂತೆ ಪ್ಯಾಬೊ ಅವರು ಅನುವಂಶೀಯ ವಿಜ್ಞಾನದ ಕ್ರಾಂತಿಗೆ ನೀಡಿದ ಕೊಡುಗೆಗೆ ನಾವು ತಲೆಬಾಗಲೇಬೇಕು. ಸುಮಾರು
600,000 ವರ್ಷಗಳ ಹಿಂದೆ ನಿಯಾಂಡರ್ತಾಲ್, ಡೆನಿಸೊವನ್
ಮತ್ತು ಆಧುನಿಕ ಮಾನವರು ಒಂದೇ ಮೂಲ ಪೂರ್ವಜರನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಕಳೆದ
ಹಲವು ದಶಕಗಳಿಂದ ನಾವು ನಮ್ಮ ಕಳೆದುಹೋದ ಪುರಾತನರಾದ ನಿಯಾಂಡರ್ತಾಲ್ ಮತ್ತು ಡೆನಿಸೊವನ್ ರನ್ನು ಹುಡುಕುತ್ತಿದ್ದೇವೆ.
ಸಂಶೋಧನೆಗಳು ಹೇಳುವುದೇನೆಂದರೆ ನಮ್ಮ ಪೂರ್ವಜರು ಈ ಗುಂಪಿನ ಮಾನವರೊಡನೆ ಮಿಶ್ರಣಗೊಂಡಿದ್ದರು (ಅಂದರೆ
ಅನುವಂಶೀಯ ಸಂಕರಣೆ ನಡೆದಿತ್ತು). ಇದರ ಪರಿಣಾಮವಾಗಿ ಆಫ್ರೀಕಾದ ದಕ್ಷಿಣ ಭಾಗದಲ್ಲಿರುವ ಸಹರಾ ಮರುಭೂಮಿಯನ್ನು
ಹೊರತುಪಡಿಸಿ ಉಳಿದ ಜನಾಂಗದಲ್ಲಿ 2 ಶೇಕಡಾದಷ್ಟು ನಿಯಾಂಡರ್ತಾಲ್ ಡಿಎನ್‌ಎ ಕಂಡುಬಂದಿದೆ. ಹಾಗೆಯೇ
ಓಷಿಯಾನಿಯಾ ಮೂಲದ ಜನರಲ್ಲಿ ಸುಮಾರು 5 ಶೇಕಡಾದಷ್ಟು ಡೆನಿಸೊವನ್ ಮಾನವನ ಡಿಎನ್‌ಎ ಇತ್ತು ಎಂಬುದನ್ನು
ಸಂಶೋಧನೆ ಗಳು ಹೇಳುತ್ತಿವೆ. ಹಾಗಾಗಿ ಈ ಅನುಂಶೀಯ ವಸ್ತುವು ಕೇವಲ ಇತಿಹಾಸವನ್ನು ಹೇಳುವುದಿಲ್ಲ ಬದಲಾಗಿ
ನಮ್ಮ ದೇಹದ ರಚನೆ, ಆರೋಗ್ಯ ಮತ್ತು ಪರಿಸರಕ್ಕೆ ಹೊಂದಿಕೊಳ್ಲುವ ಶಕ್ತಿ ಮುಂತಾದ ವಿಚಾರಗಳ ಮೇಲೆ ಪ್ರಭಾವ
ಬೀರುತ್ತದೆ.
ಸುಮಾರು
600,000 ವರ್ಷಗಳ ಹಿಂದೆ ನಡೆದ ವಂಶ ಪರಂಪರೆಯ ಪುನರ್ಮಿಲನ
ಸುಮಾರು 6 ಲಕ್ಷ ವರ್ಷಗಳ
ಹಿಂದೆ ಮನುಕುಲದ ವಂಶವೃಕ್ಷ ವಿಭಜನೆಗೊಂಡಿತ್ತು. ಒಂದು ಗುಂಪು ಆಫ್ರಿಕಾದಲ್ಲಿಯೇ ನೆಲೆಸಿ ಹೋಮೋ
ಸೇಪಿಯನ್ಸ್ ಗಳಾಗಿ ರೂಪಾಂತರಗೊಂಡರು. ಹಾಗೆಯೇ ಇನ್ನೊಂದು ಗುಂಪು ಯುರೇಷ್ಯಾಕ್ಕೆ
ವಲಸೆ ಹೋಗಿ ಪಶ್ಚಿಮದಲ್ಲಿ ನಿಯಾಂಡರ್ತಾಲ್‌ಗಳು ಹಾಗೂ ಪೂರ್ವದಲ್ಲಿ ಡೆನಿಸೊವನ್‌ಗಳಾಗಿ ವಿಕಸಿತರಾದರು.
ಸಾವಿರಾರು ವರ್ಷಗಳ ಕಾಲ ಈ ಮೂರು ವಿಧದ ಮಾನವ ಜನಾಂಗಗಳು ಪ್ರತ್ಯೇಕವಾಗಿ ಬದುಕಿದವು. ತದನಂತರ ಸುಮಾರು
60,000 ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ನಮ್ಮ ಪೂರ್ವಜರು (Anatomically Modern Humans)
ಯುರೇಷ್ಯಾದ ನಿಯಾಂಡರ್ತಾಲ್ ಮತ್ತು ಡೆನಿಸೊವನ್ ರನ್ನು ಭೇಟಿಯಾದರು, ಇವರುಗಳ ನಡುವೆ ಸಂಬಂಧ ಬೆಳೆಸಿದರು.
ಇದು ಅನುವಂಶೀಯ ಸಂಕರಣೆಗೆ ಕಾರಣವಾಯಿತು. ಹಾಗಾಗಿ ಈ ಡಿಎನ್‌ಎಯು ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗುತ್ತಾ
ಹೋಗಿ ಇಂದಿಗೂ ಆಧುನಿಕ ಮಾನವರಲ್ಲಿ ಜೀವಂತವಾಗಿದೆ.
ನಮ್ಮ
ಪುರಾತನ ಬಂಧುಗಳಿಂದ ಬಂದ ಕೊಡುಗೆಗಳು ಮತ್ತು ಸವಾಲುಗಳು
ನೀವು ಎಂದಾದರೂ ಯೋಚಿಸಿದ್ದೀರಾ
, ನಮ್ಮಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಪುರಾತನರಿಂದ ಬಂದ ಡಿಎನ್ಎಯು ಏನೆಲ್ಲಾ ಪರಿಣಾಮಗಳನ್ನು
ಬೀರುತ್ತದೆ ಎಂದು? ಹಾಗಾದರೆ ಆ ಪರಿಣಾಮಗಳು ಏನೇನು ಎಂದು ತಿಳಿದುಕೊಳ್ಳೋಣ.
ಅನುವಂಶೀಯ ಸಂಕರಣೆಯು ಪ್ರಕೃತಿಯ
ಒಂದು ದೊಡ್ಡ ಪ್ರಯೋಗವಾಗಿದೆ. ಕೆಲವೊಂದು ಉಪಯುಕ್ತವಾದ ಜೀನ್‌ಗಳು ಉಳಿದುಕೊಂಡರೆ ಹಾನಿಕಾರಕ ಜೀನ್‌ಗಳು
ನಿಧಾನವಾಗಿ ಕಣ್ಮರೆಯಾದವು. ಆದರೆ ಕೆಲವೊಂದು ಸವಾಲುಗಳು ನಮ್ಮನ್ನುಇಂದು ಕಾಡುತ್ತಿವೆ. ಇಂದಿನ ವ್ಯೆಜ್ಞಾನಿಕ
ಅಧ್ಯಯನಗಳು ಈ ಜೀನ್ ಗಳ ಪ್ರಭಾವಗಳನ್ನು ಸಂಶೋಧಿಸುತ್ತಿವೆ.
ರೋಗ ನಿರೋಧಕ ಶಕ್ತಿ: ಸಂತಸದ ವಿಚಾರವೇನೆಂದರೆ ಅನೇಕ ನಿಯಾಂಡರ್ತಾಲ್ ಜೀನ್ ಗಳು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿದವು. ಅವು ಪುರಾತನ ವ್ಯೆರಸ್ ಗಳಿಂದ ಹರಡುವ ರೋಗಗಳ ವಿರುದ್ದ ರಕ್ಷಣೆ ನೀಡಿದವು. ದುರಾದೃಷ್ಟವಶಾತ್ ಇವುಗಳಲ್ಲಿ ಕೆಲವು ಜೀನ್ ಸ್ವರೂಪಗಳು ಸಂಧಿವಾತದಂತಹ ಸ್ವಯಂಪ್ರತಿರೋಧಕ ವ್ಯವಸ್ಥೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕೋವಿಡ್-19ನ ಸಂಪರ್ಕ: ಕ್ರೊಮೋಸೋಮ್ 3 ರಲ್ಲಿ ಕಂಡುಬರುವ ನಿಯಾಂಡರ್ತಾಲ್ ಡಿಎನ್‌ಎಯು ಕೋವಿಡ್-19 ನಿಂದ ಉಂಟಾಗುವ ಗಂಭೀರ ಉಸಿರಾಟದ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಆಶ್ಚರ್ಯವೇನೆಂದರೆ ಇದೇ ಡಿಎನ್‌ಎಯು ಹೆಚ್‌ಐವಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಸಹಜ ಪರಿಸರ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಶಕ್ತಿ: ಪುರಾತನರಿಂದ ಬಂದಂತಹ ಡಿಎನ್‌ಎಯು ವಿವಿಧ ಪರಿಸರ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ನೀಡಿದೆ. ಡೆನಿಸೊವನ್ ಡಿಎನ್‌ಎಯು ಎತ್ತರ ಪ್ರದೇಶದಲ್ಲಿ ವಿರಳ ಆಮ್ಲಜನಕ ವಾತಾವರಣದಲ್ಲಿ ಬದುಕುವ ಸಾಮರ್ಥ್ಯವನ್ನು ಕಲ್ಪಿಸಿದೆ. ಉದಾಹರಣೆಗೆ ಟಿಬೇಟಿಯನ್ ಜನರು ಎತ್ತರದ ಹಿಮಾಲಯ ಭಾಗಗಳಲ್ಲಿ ಜೀವಿಸುತ್ತಿರುವುದು ಕಾಣಬಹುದು. ಡೆನಿಸೊವನ್ ಡಿಎನ್‌ಎ ತುಣುಕು ದೇಹದ ಉಷ್ಣಾಂಶದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ದೇಹದ ಉಷ್ಣಾಂಶವನ್ನು ಹೆಚ್ಚಿಸುವುದರ ಮೂಲಕ ಗ್ರೀನ್ ಲ್ಯಾಂಡ್ ನ ಇನ್ಯೂಯಿಟ್ ಜನರಿಗೆ ತೀರ್ವ ಶೀತ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯಕವಾಗಿದೆ.
ಚಯಾಪಚಯ ಕ್ರೀಯೆಗಳ ಮೇಲಿನ ಪ್ರಭಾವ: ಕೆಲವೊಂದು ಜೀನ್ ತುಣುಕುಗಳು ದೇಹದ ಚಯಾಪಚಯ ಕ್ರೀಯೆಗಳ ಮೇಲೆಯೂ ಪಾರಿಣಾಮ ಬೀರಿದೆ. ಕೆಲವು ನಿಯಾಂಡರ್ತಾಲ್ ಜೀನ್ ಗಳು ಕೊಬ್ಬಿನ ಚಯಾಪಚಯ ಕ್ರೀಯೆಯನ್ನು(lipid metabolism) ನಿಯಂತ್ರಿಸುತ್ತದೆ. ಹಾಗೆಯೇ ಇದು ಮಧುಮೇಹದ (Type 2 Diabetes) ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಂದು ಜೀನ್ ರೂಪಾಂತರಗಳು ನಾವು ಸೇವಿಸುವ ಔಷಧಗಳ ಚಯಾಪಚಯ ಪ್ರಕ್ರೀಯೆ ಮತ್ತು ದೇಹದಲ್ಲಿ ಹೇಗೆ ಪೋಷಕಾಂಶಗಳ ಹೀರಿಕೆಯಾಗುತ್ತವೆ ಎಂಬ ಅಂಶಗಳ ಮೇಲೆ ಪರಿಣಾಮ ಹೊಂದಿದೆ.
ದೇಹದ ಮೇಲ್ಮೈ ಲಕ್ಷಣಗಳ ಮೇಲಿನ ಪರಿಣಾಮ: ಕೆಲವು ಪುರಾತನ ಡಿಎನ್‌ಎ ತುಣುಕುಗಳು ಚರ್ಮದ ಬಣ್ಣ, ಕೂದಲಿನ ಸ್ವಭಾವ, ಹಾಗೂ ನೋವು ಗ್ರಹಿಕೆಯಂತಹ ಹಲವಾರು ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ಒಂದು ವಿಶೇಷ ನಿಯಾಂಡರ್ತಾಲ್ ಜೀನ್ ಹೆಚ್ಚಿನ ನೋವು ಸಂವೇದನೆಗೆ ಕಾರಣವಾಗುತ್ತದೆ.
ಆಧುನಿಕ
ಮಾನವನ ವಿಕಾಸಕ್ಕೆ ಪ್ರೇರೇಪಿಸಿದ ಅಂಶಗಳು
ವಿಜ್ಞಾನಿಗಳು ನಾವು ”ಮಾನವರು“
ಎಂದು ಸಾಭೀತುಪಡಿಸಲು ಬೇಕಾದ ಜೀನ್ ಗಳ ಪಟ್ಟಿಯನ್ನು
ಮಾಡಬಹುದು ಹಾಗೂ ನಾವು ಹೇಗೆ ನಿಯಾಂಡರ್ತಾಲ್ ಗಳಿಂದ ವಿಭಿನ್ನವಾಗಿದ್ದೇವೆ ಎಂಬುದಕ್ಕೆ ಸಾಕ್ಷಿಗಳನ್ನು
ನೀಡಬಹುದು ಆದರೆ ನಿಜವಾದ ವಿಚಾರವು ಆಸಕ್ತಿದಾಯಕವಾಗಿದೆ!
ಕೇವಲ ಒಂದು ಅನುವಂಶಿಕ ಬದಲಾವಣೆಯಿಂದ ಆಧುನಿಕ ಮಾನವನು ರೂಪಿತಗೊಂಡಿಲ್ಲ ಬದಲಾಗಿ ವಿವಿಧ ಅನುವಂಶಿಕ
ಸಂಯೋಜನೆಗಳು ಮಿಶ್ರಣಗೊಂಡು ಆಧುನಿಕ ಮಾನವನ ವಿಕಾಸವಾಗಿದೆ. ಹಾಗಾಗಿ ವಿವಿಧ ಅನುವಂಶಿಕ ಗುಣಲಕ್ಷಣಗಳ
ಸಂಯೋಜನೆಯು ಹೋಮೋ ಸೇಪಿಯನ್ಸ್ ಗಳ ವಿಕಾಸಕ್ಕೆ ನಾಂದಿಯಾಗಿದೆ.
ಸಾಮಾನ್ಯವಾಗಿ ಎಲ್ಲ ಆಧುನಿಕ ಮಾನವರಲ್ಲಿ ಕಂಡುಬರುವ ಜೀನ್‌ಗಳು ಇಂದು ಕೆಲವರಲ್ಲಿ ಪ್ರಾಚೀನ ರೂಪದಲ್ಲಿ
ಕಂಡುಬರುತ್ತದೆ. ಇದಕ್ಕೆ ಪ್ರಾಚೀನ ಕಾಲದಲ್ಲಿನ ವಿವಿಧ ಜನಾಂಗಗಳ ಮಿಶ್ರಣವು ಕಾರಣವಾಗಿರಬಹುದು.
ನೀವು ಭವಿಷ್ಯದಲ್ಲಿ ಯಾವುದಾದರೂ
ಕಾಯಿಲೆಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾದೆ, ಮೈಕೊರೆಯುವ ಚಳಿಯ ಅನುಭವ ಎದುರಾದರೆ ಹಾಗೆಯೇ
ಎತ್ತರದ ಪರ್ವತ ಪ್ರದೇಶದಲ್ಲಿ ಉಸಿರಾಡುವ ಸನ್ನಿವೇಶ ಬಂದರೆ ನೆನಪಿಸಿಕೊಳ್ಳಿ, ನಿಮ್ಮ ಇತಿಹಾಸವು ನೀವು
ತಿಳಿದಿರುವುದಕ್ಕಿಂತಲೂ ಆಳವಾಗಿದೆ ಎಂದು! ನೀವು ಪರಿಶುದ್ಧ ಜಾತಿಯಲ್ಲ ಬದಲಾಗಿ ಅನೇಕ ಪುರಾತನ ಮಾನವರ
ಡಿಎನ್‌ಎ ಇಂದ ಹೆಣೆಯಲ್ಪಟ್ಟ ಬಣ್ಣದ ವಸ್ತ್ರದಂತ್ತಿದ್ದೀರಿ. ನಿಯಾಂಡರ್ತಾಲ್ ಮತ್ತು ಡೆನಿಸೊವನ್
ಗಳಿಂದ ಬಂದಂತಹ ಜೀನ್ ಗಳು ಅಪಾಯಗಳಲ್ಲ ಬದಲಾಗಿ ಅವುಗಳು ಅವರಲ್ಲಿ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿದ್ದವು
ಮತ್ತು ಅದು ಇಂದಿಗೂ ನಮ್ಮಲ್ಲಿದೆ. ಈ ಎಲ್ಲಾ ಅಂಶಗಳು ನಮ್ಮ ಪೂರ್ವಜರ ಜೊತೆಗಿನ ಸಂಪರ್ಕವನ್ನು ತೋರಿಸುವ
ಜೀವಂತ ಸಾಕ್ಷಿಗಳು, ಹಾಗೆಯೇ ಆರೋಗ್ಯ ಮತ್ತು ವೈವಿಧ್ಯತೆಯನ್ನು ಸಾರುವ ಕುತೂಹಲಕಾರಿ ವಿಚಾರಗಳು.

Comments
Post a Comment