ದಕ್ಷಿಣ ಭಾರತದ ಯೋಧ ಕುಲಗಳಲ್ಲಿ ಅನಿರೀಕ್ಷಿತ ಮಧ್ಯಪ್ರಾಚ್ಯ ಅನುವಂಶ
ನೈಋತ್ಯ ಭಾರತದ ಪಶ್ಚಿಮ ಘಟ್ಟಗಳ ಹಾಗೂ ಅರಬ್ಬಿ ಸಮುದ್ರದ ಕರಾವಳಿಯ ನಡುವೆ ಕಂಡುಬರುವ ಕಿರಿದಾದ ಪ್ರದೇಶವು ಶ್ರೀಮಂತ ಸಂಪ್ರದಾಯಗಳನ್ನು ಹಾಗೂ ಜನಪದವನ್ನು ಒಳಗೊಂಡ ಹಲವಾರು ಅಂತರ್ವಿವಾಹ ಜನಾಂಗದ ವಾಸಸ್ಥಾನವಾಗಿದ್ದು, ಜನಾಂಗೀಯ ಭಾಷಾ ವೈವಿಧ್ಯತೆಯ ತಾಣವಾಗಿದೆ. ಇಂಡೋ ಯುರೋಪಿಯನ್ ಹಾಗೂ ದ್ರಾವಿಡ ಎಂಬ ಜಗತ್ತಿನ ಅತಿದೊಡ್ಡ ಭಾಷಾ ಕುಟುಂಬಗಳು ಈ ಪ್ರದೇಶದಲ್ಲಿ ಶತಮಾನಗಳಿಂದ ಬೆರೆತುಕೊಂಡಿದ್ದಾರೆ. ಯುರೋಪಿನ ವಸಾಹತುಶಾಹಿ ಸಾಮ್ರಾಜ್ಯಗಳನ್ನು ಸೇರಿದಂತೆ ಅರಬ್ಬರು, ರೋಮನ್ನರು ಹಾಗೂ ಗ್ರೀಕರನ್ನು ಆಕರ್ಷಿಸಿದ್ದ ಪುರಾತಣ ಬಂದರುಗಳು ಈ ಪರಿಸರದಲ್ಲಿ ಕಾಣಬಹುದು. ಈ ಉಷ್ಣವಲಯದ ಭೂದೃಶ್ಯದಲ್ಲಿ ಅಡಿಕೆ, ತೆಂಗು ಮುಂತಾದ ಸಾಂಬಾರು ಪದಾರ್ಥಗಳನ್ನು ಹೆಚ್ಚಳವಾಗಿ ಬೆಳೆಸುವ ಕೃಷಿಕರನ್ನು ಹಾಗೂ ಪರಂಪರಾಗತವಾಗಿ ಪೌರೋಹಿತ್ಯ, ಬೇಟೆಗಾರಿಕೆ ಹಾಗೂ ಶಿಲ್ಪಕಲೆಗಳ ವೃತ್ತಿಯನ್ನು ಅವಲಂಬಿಸಿಕೊಂಡಿರುವವರನ್ನು ಒಳಗೊಂಡ ಸಂಕೀರ್ಣ ಸಾಮಾಜಿಕ ರಚನೆಯನ್ನು ಹೊಂದಿಕೊಂಡ ಪ್ರದೇಶ ಇದಾಗಿದೆ.
ಮಾತ್ರವಂಶಿಯ
ಅನುವಂಶಿಕತೆಯನ್ನು ಹೊಂದಿರುವ ವಿಶಿಷ್ಟ ಯೋಧ ಕುಲಗಳಾದ ಬಂಟರು, ತಿಯ್ಯರು ಹಾಗೂ ನಾಯರ್ಗಳು ನೈಋತ್ಯ ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದು, ಇವರು ಉತ್ತರಭಾರತ ಹಾಗೂ ಶ್ರೀ ಲಂಕಾದಿಂದ ವಲಸೆ ಬಂದಿರುವರೆಂದು
ಐತಿಹಾಸಿಕ ಪುರಾವೆಗಳಲ್ಲಿ ಉಲ್ಲೇಖವಾಗಿದೆ. ಆದರೆ
ಆನುವಂಶಿಕ ಪುರಾವೆಗಳು?
ಡಾ. ಕೆ. ತಂಗರಾಜ್ ನೇತೃತ್ವದ ಭಾರತೀಯ ಸಂಶೋಧಕರ ಗುಂಪು ಆನುವಂಶಿಕ ಪುರಾವೆಗಳನ್ನು
ಶೋಧನೆ ನಡೆಸುವಲ್ಲಿ ಸಫಲರಾದರು.
ಈ ಸಂಶೋಧನೆಯ ಸಂಕ್ಷಿಪ್ತ
ವಿವರವು “ಜಿನೋಮ್ ಬಯಾಲಜಿ ಮತ್ತು ಇವಲ್ಯೂಷನ್” (Kumar et. al. 2023), ನಲ್ಲಿ ಪ್ರಕಟವಾಗಿದ್ದು, ಇದು ಯೋಧ ಕುಲಗಳ ಆನುವಂಶಿಕತೆಯ ವಿವರಗಳ ಸಂಕೀರ್ಣತೆಯನ್ನು
ಬಗೆಹರಿಸುವತ್ತ
ಒಂದು ಮಹತ್ವದ ಹೆಜ್ಜೆಯಾಗಿದೆ.
ದೇಹದ ಹಾಗೂ ಲೈಂಗಿಕ ವರ್ಣತಂತುಗಳನ್ನು ಒಳಗೊಂಡ ಸಂಪೂರ್ಣ ಡಿಎನ್ಎ ಅನ್ನು ಅಧ್ಯಯನ ಮಾಡಿದ ಸಂಶೋಧಕರು ಈ ಸಮುದಾಯಗಳು ಮಧ್ಯಪ್ರಾಚೀಯ ಅನುವಂಶಿಕತೆಯನ್ನು ಅನುಸರಿಸುತ್ತಿದೆ ಎಂದು ಪತ್ತೆಹಚ್ಚಿದ್ದಾರೆ. ಇದು ಜನಸಂಖ್ಯಾ ತಳಿಶಾಸ್ತ್ರದಲ್ಲಿ ಈ ಹಿಂದೆ ಬಳಸಲಾಗುತ್ತಿದ್ದ Ancient North Indian (ANI) ಮತ್ತು Ancient South Indian (ASI) ಎಂಬ ಸರಳ ವಿಭಜನೆಗೆ ಸವಾಲುಗಳನ್ನು ಒಡ್ಡುತ್ತದೆ (Reich et. al. 2009). ಜನಸಂಖ್ಯಾ ರಚನೆ, ಆನುವಂಶಿಕ ಮೂಲ ಮತ್ತು ವೈವಿಧ್ಯತೆಯನ್ನು ಪತ್ತೆಮಾಡಲು ಬಳಸುವ genetic clustering (ಆನುವಂಶಿಕ ಕ್ರಮಾವಳಿ) ಅಧ್ಯಯನದಲ್ಲಿ ಐದು ಸಮುದಾಯಗಳನ್ನು ಬಳಸಲಾಯಿತು. ಅವುಗಳು – ನಾಯರ್, ತಿಯ್ಯ, ಬಂಟ, ಈಳವ ಮತ್ತು ಹೊಯ್ಸಳ. ಈ ಐದು ಜನಾಂಗಗಳನ್ನು ಆನುವಂಶಿಕವಾಗಿ ಇಂಡೋ ಯುರೋಪಿಯನ್ ಮತ್ತು ದ್ರಾವಿಡ ಭಾಷಾ ಗುಂಪುಗಳ ನಡುವೆ ಇರಿಸಲಾಯಿತು. ಇವುಗಳಲ್ಲಿ ನಾಯರ್ ಮತ್ತು ಹೊಯ್ಸಳರು Gangetic Brahmins (ಗಂಗಾ ನದಿ ಪ್ರದೇಶದ ಬ್ರಾಹ್ಮಣ) ರೊಂದಿಗೆ ಸೇರಿದ್ದು, ಉತ್ತರದ ಗುಂಪುಗಳೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದಂತೆ ತೋರುತ್ತದೆ. ಅಂತೆಯೇ ಈಳವರು ದ್ರಾವಿಡ ಗುಂಪಿಗೆ ಸೇರುತ್ತಾರೆ. ಗಮನಾರ್ಹವಾಗಿ, ತಿಯ್ಯ ಸಮುದಾಯದವರು ನಾಯರ್ ಹಾಗೂ ದ್ರಾವಿಡ, ಎರಡೂ ಗುಂಪುಗಳಲ್ಲಿಯೂ ಕಂಡುಬಂದಿದ್ದು, ಆಂತರಿಕ ವೈವಿಧ್ಯತೆಯನ್ನು ತೋರುತ್ತದೆಯೆಂದು ಈ ಅಧ್ಯಯನ ಬಹಿರಂಗಪಡಿಸಿದೆ.
ವ್ಯಕ್ತಿಯ ಆನುವಂಶಿಕ ಹಿನ್ನೆಲೆಯನ್ನು ಪತ್ತೆಹಚ್ಚಲು ಬಳಸುವ ADMIXTURE ಅಧ್ಯಯನದ ಫಲಿತಾಂಶದ ಪ್ರಕಾರ ಯೋಧ ಸಮುದಾಯಗಳಲ್ಲಿ ಹಾಗು ವಾಯುವ್ಯ ಭಾರತದ ಗುಂಪುಗಳಲ್ಲಿ ಮಧ್ಯಪ್ರಾಚ್ಯ ಅಂಶದ ಇರುವಿಕೆ ಪತ್ತೆಯಾಗಿದೆ. ವಿಶೇಷವೆಂದರೆ, ಈ ಅಂಶವು ಗಂಗಾ ನದಿ ಪ್ರದೇಶದ ಇಂಡೋ ಯುರೋಪಿಯನ್ ಜನರಲ್ಲಿ ಹಾಗೂ ದ್ರಾವಿಡ ಭಾಷಾ ಜನಾಂಗದಲ್ಲಿ ಕಂಡುಬರಲಿಲ್ಲ. ನಾಯರ್ಗಳಲ್ಲಿ ಈ ಅಂಶ ಅತ್ಯಧಿಕವಾಗಿ ಕಂಡುಬಂದಿದ್ದು, ಈ ಗುಂಪಿನ ಉತ್ತರ ದಕ್ಷಿಣ ವಲಸೆಯನ್ನು ಮತ್ತಷ್ಟು ಬೆಂಬಲಿಸಿದೆ. ಈ ಅಂಶದ ಬೇರನ್ನು ಹುಡುಕುತ್ತಾ ಹೋದ ಸಂಶೋಧಕರು, ಇದು ಅರೇಬಿಯಾ ಅಂಶವಾಗಿರಬಹುದು ಎಂದು ಊಹಿಸುತ್ತಾರೆ. ಈ ಅಂಶವು ಆಧುನಿಕ ಇರಾನಿಯರಲ್ಲಿದ್ದು, ಅರಬ್ಬರ ವ್ಯಾಪಾರ ಮಾರ್ಗಗಳ ಮೂಲಕ ವಾಯುವ್ಯ ಭಾರತದಿಂದ ದಕ್ಷಿಣಕ್ಕೆ ಹರಿಯಿತು ಎಂದು ಅಂದಾಜಿಸಲಾಗಿದೆ. ಈ ಗುಂಪುಗಳ ಮೂಲ ಸಿಥಿಯನ್ ಎಂದು ಐತಿಹಾಸಿಕ ಮಾಹಿತಿ ಲಭ್ಯವಿದ್ದರು ಯಾವುದೇ ಆನುವಂಶಿಕ ಪುರಾವೆಗಳು ಈ ಅಧ್ಯಯನದಲ್ಲಿ ಕಂಡುಬಂದಿಲ್ಲ.
ಜೀನ್ಗಳ ಹರಿವಿನ ಮಟ್ಟವನ್ನು ಅಳೆಯಲು ಬಳಸಲಾಗುವ ವಲಸೆ, ಮೇಲ್ಮೈ ವಿಶ್ಲೇಷಣೆಯನ್ನು ಬಳಸಿ ಈ ಗುಂಪುಗಳು ಹೇಗೆ ದಕ್ಷಿಣದೆಡೆಗೆ ಬಂದವು ಎಂದು ಕಂಡುಹಿಡಿಯಬಹುದು. ಈ ಪ್ರಕ್ರಿಯೆಯೊಂದಿಗೆ ಭೌಗೋಳಿಕ ನಿರ್ದೇಶಾಂಕಗಳನ್ನು ಹಾಗೂ ಎರಡು ವ್ಯಕ್ತಿಗಳ ನಡುವಿನ ತಳೀಯ ವ್ಯತ್ಯಾಸವನ್ನು ತಿಳಿಯಲು ಬಳಸುವ pairwise genetic distance ಎಂಬ ವಿಧಾನವು ಒಳಗೊಂಡಿದೆ. ಇದರ ಫಲಿತಾಂಶವಾಗಿ ಈ ಗುಂಪುಗಳ ಪೂರ್ವಜರು ಮಧ್ಯಭಾರತ, ಗೋದಾವರಿ ಹಾಗೂ ನರ್ಮದಾ ನದಿ ಜಲಾನಯನ ಪ್ರದೇಶವಾಗಿ ಬಂದರೆಂದು ತಿಳಿಯಬಹುದು. ಕಂಬೋಜ್, ಗುಜ್ಜರ್ ಮತ್ತು ಕೆಲವು ವಾಯುವ್ಯ ಭಾರತೀಯರಂತೆ ಬಂಟ ಮತ್ತು ನಾಯರ್ಗಳಲ್ಲಿಯು ಶೇಕಡಾ ಅರವತ್ತರಷ್ಟು ಸಿಂಧೂ ಪರಿಧಿಯ ಅನುವಂಶಿಕತೆ ಇದ್ದು, ಇವರುಗಳ ಮೂಲವು ಹರಪ್ಪನ್ನರ ಜನಾಂಗಕ್ಕೆ (ಸಿಂಧೂ ಕಣಿವೆ ನಾಗರಿಕತೆಗೆ) ಸೇರಿದಂತೆ ತೋರುತ್ತದೆ. ಈ ನಾಗರಿಕತೆಯ ಪತನದ ನಂತರ ಬಂಟ ಮತ್ತು ನಾಯರ್ಗಳ ವಂಶಸ್ಥರು ದಕ್ಷಿಣದೆಡೆಗೆ ವಲಸೆ ಬಂದಿರುವರೆಂದು ಅಧ್ಯಯನವು ಸೂಚಿಸುತ್ತದೆಯಾದರೂ, ಭಿನ್ನತೆಯ ನಿಖರವಾದ ಸಮಯವನ್ನು ಉಲ್ಲೇಖಿಸುವುದಿಲ್ಲ. ಇದು ಭವಿಷ್ಯದ ಸಂಶೋಧನೆಗೆ ಒಂದು ಪ್ರಮುಖ ಪ್ರಶ್ನೆಯಾಗಿ ಉಳಿದಿದೆ.
ಭಾರತದಲ್ಲಿ ಪುರುಷ ಪ್ರಧಾನವಾದ ವಂಶಾವಳಿಯು ಹಲವೆಡೆ ಕಂಡುಬರುತ್ತದೆ. ಇದಕ್ಕೆ ಬಂಟರ ಮತ್ತು ತಿಯ್ಯರ ಮಾತೃಪ್ರಧಾನ ವಂಶವಾಹಿ ಹರಿವು ವ್ಯತಿರಿಕ್ತವಾಗಿದೆ. ಈ ಎರಡು ಸಮುದಾಯಗಳ Mitochondrial DNA (ಮಾತ್ರಾರ್ಜಿತ ಅಂಶ) ಅಧ್ಯಯನದ ನಂತರ, ಪಶ್ಚಿಮ ಯುರೇಷಿಯನ್ನರ ಹ್ಯಾಪ್ಲೋಗ್ರೂಪ್ (haplogroups) ಹೆಚ್ಚಿನ ಪ್ರಮಾಣದಲ್ಲಿ ಇದೆಯೆಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ಅಧ್ಯಯನವು ದಕ್ಷಿಣ ಭಾರತದ ಜನಾಂಗಗಳ ಇತಿಹಾಸದ ಬಗ್ಗೆ ನಮ್ಮ ತಿಳುವಳಿಕೆಯನ್ನು ಮರುರೂಪಿಸುತ್ತಾ 'ಉತ್ತರ - ದಕ್ಷಿಣ ಆನುವಂಶಿಕ ವಿಭಜನೆ' (ANI-ASI) ಎನ್ನುವ ಸರಳ ಸಿದ್ಧಾಂತವನ್ನು ಪ್ರಶ್ನೆಗೊಳಿಸುತ್ತದೆ. ಭಾರತೀಯ ಉಪಖಂಡವನ್ನು ರೂಪಿಸಿರುವ ಮಿಶ್ರಣ ಮತ್ತು ಮಾನವ ಚಲನಶಾಸ್ತ್ರದ ಸಂಕೀರ್ಣ ಪ್ರಶ್ನೆಗಳನ್ನು, ಮುಂದುವರಿದ ಆನುವಂಶಿಕ ಸಂಶೋಧನಾ ಪರಿಕರಗಳು ಹೇಗೆ ಉತ್ತರಿಸಬಹುದು ಎಂಬುದನ್ನು ಈ ಅಧ್ಯಯನವು ತೋರಿಸುತ್ತದೆ.
Article by Soumya Shenoy and Jaison Sequeira, Mangalore University
Comments
Post a Comment