ಕೊರಗ ಜನಾಂಗದ ಅನುವಂಶಿಕ ಅಧ್ಯಯನ: ಭಾರತೀಯ ಪುರಾತನರ ಕಥೆಗೊಂದು ಹೊಸ ಬೆಳಕು


ಕ್ಷಿಣ ಭಾರತದ ಕರಾವಳಿ ಪ್ರದೇಶವು ವಿವಿಧ ಜನಸಮುದಾಯಗಳನ್ನು ಒಳಗೊಂಡಂತಹ ಒಂದು ವೈವಿಧ್ಯಮಯ ತಾಣವಾಗಿದೆ. ಈ ಕರಾವಳಿಯ ಹಸಿರು ಬೆಟ್ಟಗಳ ನಡುವೆ, ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿರುವ ಒಂದು ಪ್ರಾಚೀನ ಸಮುದಾಯ ಅಂದರೆ ಅದು ಕೊರಗ ಸಮುದಾಯ. ಕಾನನದ ನೆರಳಲ್ಲಿ ಬದುಕು ಕಟ್ಟಿಕೊಂಡು, ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ದಕ್ಷಿಣ ಭಾರತದ ಈ ಜನಾಂಗ ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಆಚರಣೆಗಳನ್ನು ಹೊಂದಿದ್ದಾರೆ. ಅಂದಹಾಗೆ ಇವರು ಸಮಾಜದಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ. ಇತಿಹಾಸದ ಪುಟಗಳಲ್ಲಿ “ಅಸ್ಪೃಶ್ಯರು”ಎಂದು ಗುರುತಿಸಲ್ಪಟ್ಟ ಇವರು, ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಬ್ಬರು. ಇವರು ತಮ್ಮ ಮೂಲ ಕಸುಬುಗಳಾದ ಬುಟ್ಟಿಹೆಣೆಯುವುದು, ಅರಣ್ಯದಿಂದ ಕಚ್ಚಾವಸ್ತುಗಳನ್ನು ಸಂಗ್ರಹಿಸುವುದು ಹಾಗೂ ದೈನಂದಿನ ಕೂಲಿಕೆಲಸ ಗಳಲ್ಲಿ ತೊಡಗಿಕೊಳ್ಲುವುದು ಮುಂತಾದವುಗಳಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಾರೆ. ಶತಮಾನಗಳ ಕಾಲದ ಸಾಮಾಜಿಕ ಪ್ರತ್ಯೇಕತೆ ಹಾಗು ಸಮುದಾಯದೊಳಗಿನ ವಿವಾಹ ಪದ್ದತಿಯು ಅವರ ಅನುವಂಶಿಕ ಪ್ರತ್ಯೇಕತೆಗೆ ಕಾರಣವಾಯಿತು. ಸಾಮಾಜಿಕ ಪ್ರತ್ಯೇಕತೆಯು ಸಮುದಾಯದ ಒಂದು ಕೆಟ್ಟ ಅಧ್ಯಾಯವಾದರೂ ಅದೇ ವಿಚಾರವು ಅವರನ್ನು ಪ್ರಾಚೀನ ಇತಿಹಾಸದ ಜೀವಂತ ಸಾಕ್ಷಿಗಳಾಗಿ ರೂಪಿಸಿದೆ. ಕರಾವಳಿಯ ಮಣ್ಣಿನಲ್ಲಿರುವ ಕೊರಗ ಸಮುದಾಯದ ಹೆಜ್ಜೆಗುರುತುಗಳು ಶತಮಾನದ ಪರಂಪರೆಯನ್ನು ಸಾರುತ್ತವೆ. ಇದೀಗ ಕೊರಗ ಸಮುದಾಯದ ಜೀನ್‌ ಗಳು ಮಾತನಾಡುತ್ತಿವೆ; ಭಾರತದ ಜನರ ಮೂಲ ಮತ್ತು ಇತಿಹಾಸದ ಕುರಿತು ನಮ್ಮಲ್ಲಿದ್ದ ಕಲ್ಪನೆಗಳನ್ನು ಪ್ರಶ್ನಿಸುತ್ತಿವೆ. 

ಹಲವಾರು ವರ್ಷಗಳ ಕಾಲ ಭಾರತದ ಇತಿಹಾಸದ ಜನಾಂಗವು ತ್ರಿವಿಧ ಮೂಲಗಳಿಂದ ಬಂದಿದೆ ಎಂದು ಸರಳವಾಗಿ ಹೇಳಲಾಗುತ್ತಿತ್ತು. ಅವುಗಳೆಂದರೆ ಅಂಡಮಾನ್‌ ದ್ವೀಪದ ಭೇಟೆಯಾಡುವ ಜನಾಂಗಗಳಿಗೆ ಸಂಬಂಧಿಸಿದ ಪ್ರಾಚೀನ ದಕ್ಷಿಣ ಭಾರತೀಯರು (AASI), ಇರಾನಿನ ಸಮತಟ್ಟಿನ ಪ್ರದೇಶದ ಕೃಷಿಕರು ಹಾಗೂ ಯುರೋಪಿಯನ್‌ ಮೂಲದ ಪಶುಪಾಲಕರು. ಆದರೆ European Journal of Human Genetics ನಲ್ಲಿ ಪ್ರಕಟವಾದ ಕೊರಗ ಸಮುದಾಯದ ಕುರಿತಾದ ಪ್ರಮುಖ ಅಧ್ಯಯನವು ಈ ಚಿತ್ರಣವನ್ನು ಅಪೂರ್ಣವೆಂದು ತೋರಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ.ಎಂ.ಎಸ್‌ ಮುಸ್ತಾಕ್‌ ಮತ್ತು ಯೆನೆಪೋಯ ಅಧ್ಯಯನ ಕೇಂದ್ರದ ಡಾ.ರಣಜಿತ್‌ ದಾಸ್‌ ಅವರ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯು, ಹೊಸದಾಗಿ ಇದುವರೆಗೆ ತಿಳಿಯದ ಮತ್ತೊಂದು ಪೂರ್ವಜ ಮೂಲವನ್ನು ಹುಡುಕಿದೆ ಅವರೇ ” ಪ್ರೋಟೋ -ದ್ರಾವಿಡರು”. 

ಒಂದು ಜನಸಮುದಾಯದ ಭಾಷೆಯು ಇತಿಹಾಸವನ್ನು ಬಗೆಯಲು ಸಹಾಯಕವಾಗುತ್ತದೆ ಎಂದಾಗ ಅಚ್ಚರಿಯಾಗುತ್ತದೆಯಲ್ಲವೇ? ಹೌದು ಒಂದು ಜನಾಂಗದ ಭಾಷಾತ್ಮಕ ಸಂಬಧವು ಅವರ ಪೂರ್ವಜರ ಬಗೆಗಿನ ಚಿತ್ರಣವನ್ನು ನೀಡುತ್ತದೆ. ಉದಾಹರಣೆಗೆ ಕೊರಗ, ಕುರುಖ್ ಹಾಗೂ ಬ್ರಾಹುಯಿ ಬಾಷೆಗಳ ನಡುವೆ ಕಂಡುಬಂದ ಸಾಮ್ಯತೆಗಳು ಈ ಅಧ್ಯಯನಕ್ಕೆ ನಾಂದಿಯಾಗಿದೆ. ಅಧ್ಯಯನದ ಮುಖ್ಯ ಸಂಶೋಧಕರಾದ ಡಾ. ಜೈಸನ್‌ ಸಿಕ್ವೇರಾ ಇವರು ಕೊರಗ, ಕುರುಖ್ ಮತ್ತು ಬ್ರಾಹುಯಿ ಭಾಷೆಗಳ ನಡುವಿನ ಸಾಮ್ಯತೆಯನ್ನು ಆಧಾರವಾಗಿರಿಸಿಕೊಂಡು ಈ ಭಾಷಾತ್ಮಕ ನಂಟು ಅನುವಂಶಿಕ ಮಟ್ಟದಲ್ಲಿಯೂ ಪ್ರತಿಫಲಿಸಬಹುದು ಎಂಬ ಕಲ್ಪನೆಯ ಆಧಾರದ ಮೇಲೆ ವಿಶಿಷ್ಠ ಅನುವಂಶಿಕ ಮಾದರಿಯನ್ನು ರೂಪಿಸಿದರು. ಇವರ ಈ ದೃಷ್ಠಿಕೋನ ಕೊರಗ ಸಮುದಾಯದ ಇತಿಹಾಸವನ್ನು ಅನಾವರಣಗೊಳಿಸಲು ಸಹಕಾರಿಯಾಯಿತು.

ಅನುವಂಶೀಯತೆ ಮತ್ತು ಭಾಷೆಯ ನಡುವಿನ ಅಂತರವನ್ನು ಅಳೆಯುವ ಉದ್ದೇಶದಿಂದ ಸಂಶೋಧನಾ ತಂಡವು ಪ್ರಸಿದ್ಧ ಭಾಷಾ ವಿಜ್ಞಾನಿ ಪ್ರೊಫೆಸರ್‌ ಜಾರ್ಜ್‌ ವ್ಯಾನ್‌ ಡ್ರಿಮ್‌ ಅವರನ್ನು ತಂಡದ ಒಳಗೂಡಿಸಿಕೊಂಡಿತ್ತು. ಇದರ ಫಲವಾಗಿ ಸಂಶೋಧನೆಯು ಕೇವಲ ಅನುವಂಶಿಕ ಮಾಹಿತಿಯ ದೃಷ್ಠಿಯಿಂದ ಮಾತ್ರವಲ್ಲದೆ ಭಾಷಾತ್ಮಕ ಸಂಬಧದ ಆಧಾರದ ಮೇಲೆಯೂ ವಿಶ್ಲೇ಼ಷಿಸುವಂತಾಯಿತು. ಇದು ಕೊರಗ ಜನಾಂಗದ ಪುರಾತನ ಮೂಲವನ್ನು ಹೆಚ್ಚು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ನೆರವಾಯಿತು.

ವಿಶಾಲ ಜನಸಾಗರದೊಳಗೆ ವಿಶಿಷ್ಟವಾಗಿ ಉಳಿದ ಜನಾಂಗ


Image is a property of the Basel Mission

ಕೊರಗರ ಅನುವಂಶೀಯ ವಿಭಿನ್ನತೆಯ ಮೊದಲ ಸುಳಿವು ಅವರ ಅನುವಂಶಿಕ ನಕ್ಷೆಯಲ್ಲಿ ಕಂಡುಬಂದಿತು. Principal Component Analysis(PCA) ಎಂಬ ವಿಶ್ಲೇ಼ಷಣೆಯು ಕೊರಗರು ತಮ್ಮ ಭೌಗೋಳಿಕ ನೆರೆಹೊರೆಯವರಾದ ದಕ್ಷಿಣ ಭಾರತದ ಇತರ ಜನಾಂಗಗಳ ಹೊರತಾಗಿ ಉತ್ತರ ಭಾರತದ ಗೌಡ ಮತ್ತು ಬಾಗ್ದಿ ಜನಾಂಗಗಳೊಂದಿಗೆ ಗುಂಪುಗಟ್ಟಿರುವುದನ್ನು ತೋರಿಸಿತು. ಅವರು ಭಾರತದ ಮುಖ್ಯ ಅನುವಂಶಿಕ ರೇಖೆಯಿಂದ (ASI-ANI Cline) ದೂರ ಸರಿದಿದ್ದರಿಂದ, ಪ್ರತ್ಯೇಕವಾದ ಜನಾಂಗವಾಗಿರಬಹುದೆಂದು ತಿಳಿದು ಬಂತು.

ಕೆಲವೊಂದು ಪರೀಕ್ಷೆಗಳು ಇವರ ಗಾಢವಾದ ಪ್ರತ್ಯೇಕತೆಯನ್ನು (Genetic Isolation) ದೃಢಪಡಿಸಿದೆ. Outgroup f3 ಸಂಖ್ಯಾತ್ಮಕ ವಿಶ್ಲೇಷಣೆಯು ಕೊರಗರು ಇತರ ದಕ್ಷಿಣ ಏಷ್ಯಾದ ಜನಾಂಗಗಳೊಂದಿಗೆ ಹೆಚ್ಚು ಸಂಯೋಜನೆಯಾಗಿಲ್ಲ, ಅವರ ಜೀನ್ ಗಳು ಬಹಳ ನಿರ್ದಿಷ್ಟವಾಗಿದೆ ಎಂದು ಹೇಳುತ್ತದೆ. ಸುಮಾರು 750-1020 ವರ್ಷಗಳ ಹಿಂದೆ ಕೊರಗ ಜನಾಂಗದ ಅನುವಂಶೀಯ ವಸ್ತುವಿನಲ್ಲಾದ ದೊಡ್ಡ ಬದಲಾವಣೆಯು ಬಹಳ ಪ್ರಬಲವಾಗಿತ್ತು ಮತ್ತು ಇದು ಇತಿಹಾಸದಲ್ಲಿ ಕಂಡ ಕೆಲವು ಜನಾಂಗಗಳಿಗಿಂತ ಐದು ಪಟ್ಟು ಹೆಚ್ಚು ಬಲವಾದುದು. ಇದು “ಜನಾಂಗ ನಿರ್ದಿಷ್ಟ ವ್ಯತ್ಯಯ”(Population specific Drift) ಎಂಬ ಗಾಢವಾದ ಪ್ರಕ್ರಿಯೆಗೆ ಒಳಗಾದುದರ ಪರಿಣಾಮವಾಗಿರಬಹುದು.

ನಮ್ಮ ಪ್ರಾಚೀನ ಭಾರತವು ಅನೇಕ ರಾಜರ ಆಳ್ವಿಕೆಯಿಂದ ಕೂಡಿತ್ತು. ಈ ರಾಜರ ಆಳ್ವಿಕೆಯ ಕಾಲದ ಕೆಲವೊಂದು ವಿಚಾರಗಳು ಈ ಎಲ್ಲಾ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಸಂಶೋಧಕರು ಈ ಘಟನೆಗೆ ಕದಂಬ ಮತ್ತು ಹೊಯ್ಸಳ ವಂಶಗಳ ಕಾಲದ ಸಾಮಾಜಿಕ ಅಸ್ಥಿರತೆಯು ಕಾರಣವೆಂದು ಗುರುತಿಸಿದ್ದಾರೆ, ಆಗ ಪಾಲಿಸುತ್ತಿದ್ದಂತಹ ಜಾತಿ-ವ್ಯವಸ್ಥೆಯಂತಹ ಕಟ್ಟುಪಾಡುಗಳು ಕೊರಗ ಸಮುದಾಯದಂತಹ ಜನಾಂಗವನ್ನು ಸಂಪೂರ್ಣ ಬೇರ್ಪಡಿಸಿತು. ಇದರ ಪಾರಿಣಾಮವಾಗಿ ಅಪರೂಪದ ಅನುವಂಶಿಕ ವೈಶಿಷ್ಠ್ಯಗಳು ಹೆಚ್ಚಾಗಿದ್ದು ವಿವಿಧ ಅಂಶಗಳ ಮೇಲೆ ಪ್ರಭಾವ ಬೀರುತ್ತವೆ. ಜನಸಂಖ್ಯೆಯ ತೀರ್ವಕುಸಿತದಿಂದಾಗಿ ಕೆಲವು ಅಪರೂಪದ ಜೀನ್‌ ಗಳು ಹೆಚ್ಚಾಗಿ ಪ್ರತಿಬಿಂಬಿತವಾಗುತ್ತವೆ. ಇದರಿಂದ Loeys-Dietz syndrome, ಕುರುಡುತನ (Congential blindness), Cockayne Syndrome,ಕಿವುಡುತನ(deafness )ಮುಂತಾದ ಜೀನ್-ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಇದರಿಂದ ಇವರ ಜೀವಿತಾವಧಿ ಕಡಿಮೆಯಾಗಬಹುದು. ಕಡಿಮೆ ಜನಸಂಖ್ಯೆಯನ್ನು ಹೊಂದಿರುವಂತಹ ಈ ಸಮುದಾಯದೊಳಗಿನ ವಿವಾಹವು ಸಂಪರ್ಕತೆಯ ಒತ್ತಡಕ್ಕೆ (Inbreeding Pressure) ಕಾರಣವಾಗುತ್ತದೆ ಹಾಗೂ ವಿವಿಧ ಅನುವಂಶಿಕ ರೋಗಗಳಿಗೆ ಕಾರಣವಾಗಬಹುದು.

ಭಾಷೆ ಮತ್ತು ಪ್ರಾಚೀನತೆಯ ನಡುವಿನ ಸಂಬಂಧ

ಸಮಾಜದ ಅಂಚಿನಲ್ಲಿ ಬದುಕಿದ್ದರೂ ಕೊರಗರು ತಮ್ಮ ಸಂಸ್ಕೃತಿ ಹಾಗೂ ಭಾಷೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಉತ್ತರ ದ್ರಾವಿಡ ಭಾಷಾಗಣಕ್ಕೆ ಸೇರಿದ ಕೊರಗ ಭಾಷೆಯು ಸಂಶೋಧನೆಯ ಒಂದು ಪ್ರಮುಖ ಭಾಗವಾಗಿದೆ. ಕೊರಗರು ತುಳು ಭಾಷೆಯನ್ನು ಮಾತನಾಡುವ ಜನರ ಮಧ್ಯೆ ಇದ್ದರೂ ತಮ್ಮದೇ ಆದ ಭಾಷೆಯನ್ನು ಉಳಿಸಿಕೊಂಡಿದ್ದಾರೆ. ಅಧ್ಯಯನವು ಹೇಳುವುದೇನೆಂದರೆ ಕೊರಗರು ಹಾಗೂ ಇನ್ನೂ ಎರಡು ಉತ್ತರ ದ್ರಾವಿಡ ಭಾಷೆಯನ್ನು ಮಾತನಾಡುವ ಸಮುದಾಯಗಳಾದ ಪಾಕಿಸ್ತಾನದ ಬ್ರಾಹೂಯಿ ಮತ್ತು ಪೂರ್ವ ಭಾರತದ ಒರಾಂವ್ (ಕುರುಖ್) ಜನಾಂಗದ ನಡುವೆ ಪುರಾತನವಾದ ಅನುವಂಶಿಕ ಸಂಬಂಧವನ್ನು ಹೊಂದಿದ್ದಾರೆ. 

ALDER ವಿಧಾನವನ್ನು ಬಳಸಿ ಈ ಸಂಬಂಧವನ್ನು ವಿಶ್ಲೇಷಿಸಲಾಯಿತು. ಇದರ ಫಲಿತಾಂಶವೇನೆಂದರೆ, ಈ ಮೂರು ಜನಾಂಗಗಳು -ಕೊರಗ , ಬ್ರಾಹೂಯಿ ಮತ್ತು ಒರಾಂವ್ ಸುಮಾರು 4,400 ವರ್ಷಗಳ ಹಿಂದೆ ಸಾಮಾನ್ಯ ಪೂರ್ವಜರನ್ನು ಹೊಂದಿದ್ದರು. ಈ ಕಾಲಘಟ್ಟವು ಪ್ರಾಚೀನ ಹರಪ್ಪ ನಾಗರಿಕತೆಗೆ ಸಮೀಪವಾಗಿದೆ .ಈ ವಿಚಾರವು ತಿಳಿಸುವುದೇನೆಂದರೆ ಈ ಮೂರು ವಿಭಿನ್ನ ಜನಾಂಗಗಳು ಪೂರ್ವದಲ್ಲಿ ಭಾರತದ ಉಪಖಂಡದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದ “ಪ್ರೋಟೋ ದ್ರಾವಿಡ” ಜನಾಂಗದ ಸದಸ್ಯರುಗಳು. ಕಾಲಕ್ರಮೇಣ ಸಾಮಾಜಿಕ ,ಭೌಗೋಳಿಕ ಹಾಗೂ ಸಾಂಸ್ಕೃತಿಕ ಬದಲಾವಣೆಯಿಂದಾಗಿ ಈ ಜನಾಂಗವು ವಿವಿಧ ಕಡೆಗಳಲ್ಲಿ ವಿತರಿತವಾಯಿತು. ಈ ಕಾರಣದಿಂದಾಗಿ ಇವರೆಲ್ಲರಲ್ಲೂ ಅನುವಂಶಿಕ ಮತ್ತು ಭಾಷಾತ್ಮಕ ಸಂಬಂಧ ಇಂದಿಗೂ ಕಾಣಸಿಗುತ್ತದೆ.

ನಾಲ್ಕನೇ ಪೂರ್ವಜರ ಅನಾವರಣ

ಈ ಸಂಶೋಧನೆಯ ಮುಖ್ಯ ಉದ್ದೇಶ ಕೊರಗರ ಮೂಲದ ನಿಖರ ಸ್ವರೂಪವನ್ನು ಪತ್ತೆಹಚ್ಚುವುದಾಗಿತ್ತು. qpAdm and f4- ratio ಪರೀಕ್ಷೆಗಳನ್ನು ಬಳಸಿಕೊಂಡು ಸಂಶೋಧಕರು ಕೊರಗರ ಜೀನ್ ಸಂಯೋಜನೆಯನ್ನು ವಿಶ್ಲೇಷಿಸಿದರು. ಇದರಿಂದ ತಿಳಿದು ಬಂದೂದೇನೆಂದರೆ ಕೊರಗ ಜನಾಂಗದ ಜೀನ್ ಸಂಯೋಜನೆ (Genetic composition) 3 ಪ್ರಮುಖ ಮೂಲಗಳಿಂದ ಬಂದಿದೆ ಅವುಗಳೆಂದರೆ; 

1. ಪ್ರಾಚೀನ ದಕ್ಷಿಣ ಭಾರತೀಯರು (AASI) (ಇವರು ಅಂಡಮಾನ್ ದ್ವೀಪದ ಬೇಟೆಯಾಡುವ ಜನಾಂಗಕ್ಕೆ ಸಂಬಂಧಿಸಿದವರು) 
2. ಸಿಂಧೂ ನಾಗರಿಕತೆಯ ಅಂಚಿನ ಜನರು (ಇವರು ಸಿಂಧೂ ನಾಗರಿಕತೆಯ ಸುತ್ತಮುತ್ತ ವಾಸಿಸುತ್ತಿದ್ದ ಜನಾಂಗ) 
3. ಇರಾನ್ ಪರ್ವತ ಪ್ರದೇಶದ ಪ್ರಾಚೀನ ಕೃಷಿಕರು (Iran Neolithic farmers)

ಆದರೆ, ಕೊರಗರ ಅನುವಂಶಿಕ ವಸ್ತುವಿನಲ್ಲಿ ಕಂಡುಬಂದ ಇರಾನ್ ನ್ಯೂಲಿಥಿಕ್ ಅಂಶವು (Iran Neolithic Ancestry) ಇತರ ಭಾರತೀಯ ಜನಾಂಗಗಳಲ್ಲಿ ಕಂಡು ಬರುವುದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಇದು ತುಂಬಾ ಹಳೆಯ ಪ್ರಾಚೀನ ಮೂಲದಿಂದ ಬಂದದ್ದು, ಇದರರ್ಥ ಕೊರಗರು ಭಾರತದ ಜನಾಂಗೀಯ ಇತಿಹಾಸದಲ್ಲಿ ಹಳೆಯ ಮತ್ತು ಸ್ವತಂತ್ರ ಶಾಖೆಯಾಗಿ ಉಳಿದಿದ್ದಾರೆ. ಸಂಶೋಧಕರು ಇಂದಿನ ವಿವಿಧ ದ್ರಾವಿಡ ಭಾಷಾ ಜನಾಂಗಗಳ ಜೀನ್ ಮಾದರಿಗಳನ್ನು ಪರೀಕ್ಷಿಸಿದರು. ಈ ಮೂರು ಮೂಲಗಳೊಂದಿಗೆ ಕೊರಗ ಜನಾಂಗವನ್ನು ಸೇರಿಸಿದಾಗ ಮಾತ್ರ ಈ ಮಾದರಿಗಳು ಸರಿ ಹೊಂದುತ್ತವೆ , ಕೊರಗರ ಅಂಶವಿಲ್ಲದೆ ಭಾರತೀಯ ಜನಾಂಗಗಳ ಮೂಲದ ಸಂಪೂರ್ಣ ಪರಿಕಲ್ಪನೆಯನ್ನು ನೀಡಲು ಸಾಧ್ಯವಾಗುವುದಿಲ್ಲಎಂದು ಸಾಭೀತುಪಡಿಸಿದರು.

ಇದರಿಂದ ಸಂಶೋಧಕರು ತೀರ್ಮಾನಿಸಿದ್ದೇನೆಂದರೆ ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು. ಇವರ ಜೀನ್ ಗಳಲ್ಲಿ ಅಡಕವಾಗಿರುವ ಅಂಶವು ಭಾರತದ ಪುರಾತನ ಇತಿಹಾಸದಲ್ಲಿ ನಾಪತ್ತೆಯಾದ ಒಂದು ಪ್ರಮುಖ ಕೊಂಡಿಯಾಗಿದೆ.

ಭಾರತೀಯ ಜನಾಂಗದ ಹೊಸ ನಕ್ಷೆ

ಈ ಸಂಶೋಧನೆಯು ಭಾರತದ ಪುರಾತನ ಜನಾಂಗದ ಇತಿಹಾಸದ ದೃಷ್ಟಿಕೋನಕ್ಕೆ ಹೊಸ ರೂಪವನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಸುಮಾರು 4400 ವರ್ಷಗಳ ಹಿಂದೆ ಇರಾನ್ ಪರ್ವತ ಪ್ರದೇಶ ಮತ್ತು ಸಿಂಧೂ ನದಿ ಪ್ರದೇಶಗಳ ನಡುವೆ ಒಂದು ವಿಶೇಷ ಜನಾಂಗ ರೂಪಗೊಂಡಿತು ಅದೇ “ಪ್ರೋಟೋ -ದ್ರಾವಿಡ ”ಜನಾಂಗ. ಈ ಜನಾಂಗದ ಸಂತತಿಯವರು ತದನಂತರ ಭಾರತದ ವಿವಿಧ ಭಾಗಗಳಿಗೆ ವಲಸೆ ಹೋದರು ಕೆಲವರು ದಕ್ಷಿಣ ಭಾರತಕ್ಕೆ ತೆರಳಿ ಇಂದಿನ ದ್ರಾವಿಡ ಭಾಷೆ ಮಾತನಾಡುವ ಸಮುದಾಯವನ್ನು ರೂಪಿಸಿದರು, ಅದೇ ಉತ್ತರ ಭಾಗದಲ್ಲಿ ಉಳಿದು ಹೋದ ಜನರು ನಂತರ ಇಂಡೋ ಯುರೋಪಿನ್ ಭಾಷೆ ಮಾತನಾಡುವವರೊಂದಿಗೆ ಬೆರೆತು ಹೋದರು, ಆದರೂ ಇವರು ಪೂರ್ವಜರ ಕೆಲವೊಂದು ಅಂಶವನ್ನು ಉಳಿಸಿಕೊಂಡಿದ್ದಾರೆ.

ಪ್ರೋಟೋ ದ್ರಾವಿಡ ಮೂಲದ ಪ್ರತಿನಿಧಿಯಾಗಿರುವ ಕೊರಗ ಹಾಗೂ ಇರಾನ್ ನ‌ ಸುಮಾರು 10,000 ವರ್ಷಗಳ ಹಿಂದಿನ ಜನಾಂಗದ ಜನರೊಂದಿಗೆ ಅನುವಂಶಿಕ ಸಂಬಂಧವಿರುವುದರಿಂದ “ಎಲಾಮೋ- ದ್ರಾವಿಡ ಸಿದ್ಧಾಂತಕ್ಕೆ” ಬೆಂಬಲ ಸಿಕ್ಕಂತಾಗಿದೆ. ಈ ಸಿದ್ಧಾಂತದ ಪ್ರಕಾರ ಇರಾನ್ ನ ಎಲಾಮೈಟ್ (Elamite) ಭಾಷೆ ಮತ್ತು ಭಾರತದ ದ್ರಾವಿಡ ಭಾಷೆಗಳು ಒಂದೇ ಮೂಲದಿಂದ ಬಂದಿವೆ. ಹೀಗಾಗಿ ಕೊರಗರು ದ್ರಾವಿಡ ಸಂಸ್ಕೃತಿ ಮತ್ತು ಪ್ರಾಚೀನ ಇರಾನಿನ ನಡುವಿನ ಪುರಾತನ ಸಂಬಂಧದ ಜೀವಂತ ಸಾಕ್ಷ್ಯಾಧಾರವಾಗಿದ್ದಾರೆ.

ಮರಳಿ ಬಂದ ಪರಂಪರೆ 

ಅಂದ ಹಾಗೆ ಕೊರಗ ಜನಾಂಗದ ಈ ಒಂದು ಕಥೆಯು ಕೇವಲ ಸಾಮಾಜಿಕ ಅಂಚಿನ ಕಥೆಯಲ್ಲ ಇದೊಂದು ಮಾನವ ಇತಿಹಾಸದಲ್ಲಿ ಆಳವಾಗಿ ಬೇರೂರಿದ ಕಥೆಯಾಗಿದೆ. ದೀರ್ಘಕಾಲದ ಮತ್ತು ಮಾನವನ ವಲಸೆಯ ಚಿತ್ರಣವಾಗಿದೆ. ಇವರು ಭಾರತೀಯ ಸಮಾಜದ ಅಂಚಿನಲ್ಲಿರುವ ಜನರಲ್ಲ ಬದಲಾಗಿ ಭಾರತದ ಮೂಲ ಕಥೆಯ ಮುಖ್ಯ ಪಾತ್ರಧಾರಿಗಳು. ಒಮ್ಮೆ ಸಮಾಜದ ಮುಖ್ಯ ವಾಹಿನಿಯಿಂದ ತಳ್ಳಿ ಹಾಕಲ್ಪಟ್ಟಿದ್ದರೂ ಕೊರಗರ ಅನುವಂಶೀಯ ವಸ್ತು ಮತ್ತು ಭಾಷೆಯು ಪ್ರಾಚೀನ ಭಾರತದ ಕಲ್ಪನೆಗೆ ಒಂದು ಉತ್ತಮ ಸಂಪತ್ತಾಗಿ ಒದಗಿ ಬಂದಿದೆ. ಇವರಲ್ಲಿ ಕಂಡು ಬರುವ “ಪ್ರೋಟೋ- ದ್ರಾವಿಡ” ಅನುವಂಶಿಕ ಅಂಶವು ದಕ್ಷಿಣ ಭಾರತದ ದ್ರಾವಿಡ ಸಮುದಾಯದ ಮೂಲವನ್ನು ವಿವರಿಸಲು ಅತ್ಯಂತ ಮಹತ್ವದ್ದಾಗಿದೆ. ಕೊರಗ ಜನಾಂಗವು ಕೇವಲ ಒಂದು ನಿಕೃಷ್ಠವಾಗಿ ಗುರುತಿಸಲ್ಪಟ್ಟ ಜನಾಂಗವಲ್ಲ, ಇವರು ಇತಿಹಾಸದ ಜೀವಂತ ಉದಾಹರಣೆಗಳು. ಪುರಾತನ ಭಾರತದ ಜನಾಂಗೀಯ ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿದ್ದಾರೆ. ಸಾಮಾಜಿಕ ಒತ್ತಡವು ಇವರನ್ನು ಆವರಿಸಿದರೂ ಈ ಕೊರಗ ಜನಾಂಗವು ಭಾರತದ ಪ್ರಾಚೀನತೆಯ ಮುಖ್ಯ ಕುರುಹುಗಳನ್ನು ಶಾಶ್ವತವಾಗಿ ಅಚ್ಚಳಿಯದಂತೆ ಉಳಿಸಿಕೊಂಡಿದೆ.

Article by: Bindya and Jaison, Mangalore University

Comments

Popular posts from this blog

Tracing the Roots of the Koraga: The Discovery of a Lost Ancestor in India's Genetic Story

ನಾವು ಯಾರು? ಎಲ್ಲಿಂದ ಬಂದವರು? ಎಲ್ಲಿಗೆ ನಮ್ಮ ಪಯಣ?

ಬ್ರಾಹ್ಮಣರ ಪಿತೃವಂಶದಲ್ಲಿ ಗೋತ್ರದ ಮಹತ್ವ: ಅನುವಂಶಿಕ ಅಧ್ಯಯನ